ಈಶ್ವರ 2 - 
ಜಗತ್ತಿನ ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣವಾದ ಏಕೈಕ ದೈವ. ಭಿನ್ನ ಭಿನ್ನ ಮತ ಧರ್ಮಗಳಲ್ಲಿ ಕಾಲಾನುಕಾಲಕ್ಕೆ ಈ ಭಾವನೆ ಬೆಳೆದು ಬಂದ ಬಗೆಯನ್ನಿಲ್ಲಿ ವಿವರಿಸಿದೆ.

	ಹಿಂದೂ ಧರ್ಮದ ವೇದಗಳ ಕಾಲಕ್ಕೆ ಸೂರ್ಯ ಚಂದ್ರಾದಿಗಳ ಆರಾಧನೆ ಇದ್ದು ಬಹುದೇವವಾದ ಪ್ರಚಲಿತವಾಗಿತ್ತು. ಒಬ್ಬನೇ ಸರ್ವೇಶ್ವರನ ಭಾವನೆ ಇರಲಿಲ್ಲ. ಕ್ರಮೇಣ ಏಕದೇವವಾದ ಬೆಳೆಯಿತು. ಉಪನಿಷತ್ತುಗಳಲ್ಲಿ ಪರಬ್ರಹ್ಮತತ್ತ್ವಕ್ಕೆ ವಿಶೇಷ ವಿವರಣೆಗಳಿವೆ. ಪರಬ್ರಹ್ಮನಿಗೂ ಜೀವಾತ್ಮನಿಗೂ ಭೇದ ಮತ್ತು ಐಕ್ಯಭಾವನೆಗಳ ವ್ಯಾಖ್ಯಾನಗಳುಳ್ಳ ತತ್ವಮಸಿ ಮಹಾವಾಕ್ಯಗಳು ಅಲ್ಲಿ ಸಿಗುತ್ತವೆ. 

ಈಶ್ವರವಾದ ದರ್ಶನಗಳಲ್ಲಿ ಸ್ಪಷ್ಟ ರೂಪವನ್ನು ತಾಳಿತು. ಚಾರ್ವಾಕ, ಬೌದ್ಧ, ಜೈನ ಮತಗಳು ಈಶ್ವರನನ್ನು ಒಪ್ಪಿಕೊಂಡಿಲ್ಲ. ಸಾಂಖ್ಯರು ಪರಮೇಶ್ವರನನ್ನು ಅಂಗೀಕರಿಸದೆ ನಿತ್ಯೇಶ್ವರನಿಲ್ಲವೆಂದೂ ಯಾರು ಬೇಕಾದರೂ ಸಿದ್ಧರಾಗಿ ಈಶ್ವರರಾಗಬಹುದೆಂದೂ ವಾದಿಸಿದರು. ಈಶ್ವರವಾದಿಗಳೆಲ್ಲರೂ ನಿತ್ಯಸರ್ವಜ್ಞನಾದ ಸರ್ವ ಸ್ವತಂತ್ರನಾದ ಈಶ್ವರ ಅನಂತಕೋಟಿ ಬ್ರಹ್ಮಾಂಡಗಳ ವ್ಯಾಪಾರಗಳನ್ನು, ಅನಂತಕೋಟಿ ಜೀವಾತ್ಮರ ಉದ್ಧಾರ ಭಾರವನ್ನು ವಹಿಸಿ, ಪ್ರಪಂಚಾನುಗ್ರಹ ನಿರತನಾಗಿರುವನೆಂದು ಅಭಿಪ್ರಾಯಪಟ್ಟಿದ್ದಾರೆ. ಯೋಗದರ್ಶನದಲ್ಲಿ ಶುದ್ಧ ಸತ್ವ ಪ್ರಧಾನವಾದ ನಿರ್ಮಾಣ ಕಾರ್ಯವನ್ನು ಜಗದನುಗ್ರಹೇಚ್ಛಾರ್ಥವಾಗಿ ಬುದ್ಧಿ, ಮನಸ್ಸು, ಇಂದ್ರಿಯಗಳನ್ನೂ ದೋಷರಹಿತವಾದ ಸರ್ವಜ್ಞತ್ವವನ್ನೂ ಈಶ್ವರನಿಗೆ ಕೊಟ್ಟು, ಪರಮಕೃಪೆಯನ್ನೂ ಹೇಳಿ ಕ್ಲೇಶಕರ್ಮವಿಪಾಕ ಸಂಬಂಧವಿಲ್ಲದವನೆಂದು ಅವನನ್ನು ವರ್ಣಿಸಲಾಗಿದೆ. ಕಾರ್ತಿಕರು ವಿಶ್ವಕ್ಕೆ ಈಶ್ವರನೇ ಕರ್ತನೆಂದು ಒಪ್ಪಿದ್ದಾರೆ. ಆದರೆ ಮೋಕ್ಷವೆಂದರೆ ಜೀವನ ದುಃಖ ನಿವೃತ್ತಿಯೇ ಹೊರತು ಈಶ್ವರ ಪ್ರಾಪ್ತಿಯಲ್ಲವೆಂದಿದ್ದಾರೆ. ಮೀಮಾಂಸ ದರ್ಶನದಲ್ಲಿ ವೇದೋಕ್ತ ಕರ್ಮಗಳಿಂದಲೇ ಮೋಕ್ಷವೆಂದೂ ಫಲಪ್ರಾಪ್ತಿಗೆ ಈಶ್ವರನಿರಬೇಕಾಗಿಲ್ಲವೆಂದೂ ಹೇಳಿದ್ದರೂ ಕುಮಾರಿಲ ಮತ್ತು ಪಾರ್ಥಸಾರಥಿ ಮಿಶ್ರರು ತಮ್ಮ ಮೀಮಾಂಸ ಗ್ರಂಥಗಳಲ್ಲಿ ಪರಮೇಶ್ವರನ ಅನುಗ್ರಹವನ್ನು ಅಂಗೀಕರಿಸಿ ಭಕ್ತಿಮಾರ್ಗಕ್ಕೆ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ, ಅದ್ವೈತದಲ್ಲಿ ಶಂಕರಾಚಾರ್ಯರು ಪ್ರಪಂಚಕ್ಕೆ ಮೂಲಕಾರಣನಾದವ ಮಾಯಾವಿಶಿಷ್ಟ ಪರಬ್ರಹ್ಮನೆಂದೂ ಈಶ್ವರ ಸರ್ವಜ್ಞ, ಸರ್ವಾಂತರ್ಯಾಮಿ, ಜಗತ್ಕಾರಣ ಎಂದೂ ಹೇಳಿದ್ದಾರೆ. ಇದು ವ್ಯಾವಹಾರಿಕ ದೃಷ್ಟಿಯಿಂದ, ಪಾರಮಾರ್ಥಿಕ, ದೃಷ್ಟಿಯಿಂದ, ಪರಬ್ರಹ್ಮ ನಿಪ್ಪ್ರಪಂಚಕನೂ ನಿರ್ಗುಣನೂ ಆದ ಪರವಸ್ತು. ಈ ದೃಷ್ಟಿಯಲ್ಲಿ ಜಗತ್ತೇ ಮಿಥ್ಯೆಯಾದುದರಿಂದ ಜಗತ್ತಿಗೆ ಸ್ವಾಮಿಯಾದ ಈಶ್ವರನ ಪ್ರಸಕ್ತಿಯೇ ತಾತ್ವಿಕವಾಗಿ ಬರುವುದಿಲ್ಲ. ವಿಶಿಷ್ಟಾದೈತದಲ್ಲಿ ಈಶ್ವರತ್ವವನ್ನು ಲಕ್ಷ್ಮೀನಾರಾಯಣರಿಬ್ಬರಿಗೂ ಹೇಳಿ ಪರಮೇಶ್ವರ, ಪರಬ್ರಹ್ಮಪದಗಳನ್ನು ಇಬ್ಬರಿಗೂ ಸಂಭೋಧಿಸಲಾಗಿದೆ. ಈ ಪರಮೇಶ್ವರ ಸಕಲ ತತ್ವಗಳಿಗೂ ಧಾರಕ, ನಿಯಾಮಕ, ಸರ್ವಶಕ್ತ, ಪರಮಕಾರುಣಿಕ, ಸಕಲ ಕಲ್ಯಾಣಗುಣಪರಿಪೂರ್ಣ, ಸರ್ವವಸ್ತುವಿಲಕ್ಷಣ, ಸರ್ವಶಬ್ದವಾಚ್ಯ, ಅಪ್ರಾಕೃತದಿವ್ಯಮಂಗಳವಿಗ್ರಹ, ಪಿತೃಮಾತೃಸ್ಥಾನೀಯ, ಪರಮಾನಂದ ಸ್ವರೂಪ, ಪರಮಪ್ರಾಪ್ಯ, ಪರಮ ಪ್ರಾಚಕ —ಎಂದು ಶಾಸ್ತ್ರೋಕ್ತವಾಗಿ ವಿವರಿಸಿದೆ. ಅವನಿಗೆ ಸಕಲ ದೋಷರಾಹಿತ್ಯಕ್ಕೆ ಸತ್ಯಸಂಕಲ್ಪವೂ ಸಕಲ ಕಲ್ಯಾಣಗುಣ ಸಾಹಿತ್ಯಕ್ಕೆ ಸತ್ಯ ಕಾಮತ್ವವೂ ಸರ್ವವಿಲಕ್ಷಣತ್ವಕ್ಕೆ ಪುರುಷೋತ್ತಮತ್ವವೂ ನಿಯಾಮಕವಾಗಿರುವುವು. ಸಕಲವಿಧ ಪರಿಜನ ಪರಿವೃತನಾಗಿ ಲಕ್ಷ್ಮೀದೇವಿಯೊಡನೆ ನಿತ್ಯಾನುಭವದಲ್ಲಿ ಆತನಿರುತ್ತಾನೆ. ಅವನ ಶುದ್ಧ ಸತ್ತ್ವದ್ರವ್ಯಮಯವಾದ ದೇಹಕ್ಕೆ ದಿವ್ಯಮಂಗಳ ವಿಗ್ರಹವೆಂದು ಹೆಸರಿದೆ. ಲಕ್ಷ್ಮೀನಾರಾಯಣರಿಗೆ ಪುರುಷತ್ವ, ಸ್ತ್ರೀತ್ವ ಬೇಧವಿದ್ದರೂ ಗುಣವಿಭೂತಿಗಳು ಇಬ್ಬರಿಗೂ ಸಮ. ಇಬ್ಬರೂ ಆಶ್ರಿತಾನುಗ್ರಹಕ್ಕಾಗಿ ಕೃಷ್ಣ, ರುಕ್ಮಿಣಿ, ಸೀತೆ ರಾಮ ಇತ್ಯಾದಿ ಅವತಾರಗಳನ್ನು ಸ್ವೀಕರಿಸಿ ಜಗದುದ್ಧಾರ ಮಾಡುವರು. 

ಇಂಥ ಈಶ್ವರನಲ್ಲಿ ಕರ್ಮ ಜ್ಞಾನಗಳ ಮೂಲಕ ಭಕ್ತಿಯನ್ನು ಮಾಡಬೇಕು. ಭಕ್ತಿಗೆ ಪ್ರತಿಸ್ಪಂಧಕಗಳಿದ್ದವರು ಜಾತಿ ಕುಲ ಗೋತ್ರ ವಿದ್ಯೆ ಇತ್ಯಾದಿ ಯಾವ ಬೇಧಗಳನ್ನೂ ಮೀರಿದ ಪರಮಾತ್ಮನಿಗೆ ಜೀವಾತ್ಮ ಶೇಷಭೂತನೆಂಬ ಶೇಷತ್ವಾನುಸಂಧಾನವೆಂಬ ಪ್ರಪತ್ತಿಮಾರ್ಗದಿಂದ ಈ ಜನ್ಮದಲ್ಲಿಯೇ ಮೋಕ್ಷ ಹೊಂದಬಹುದು. ಇದು ಸುಲಭ ಮಾರ್ಗ, ದ್ವೈತ ದರ್ಶನದಲ್ಲಿ ಜಗತ್ಕಾರಣಾದಿ ಸರ್ವ ವ್ಯಾಪಾರವನ್ನು ವಿಷ್ಣುವಿಗೇ ಸಮರ್ಥಿಸಿ ವಿಷ್ಣುವನ್ನು ಈಶ್ವರನ ಸ್ಥಾನದಲ್ಲಿಡಲಾಗಿದೆ. ಈ ವಿಷ್ಣುಸರ್ವೋತ್ತಮ ವಾದದಲ್ಲಿ ಲಕ್ಷ್ಮಿ, ಬ್ರಹ್ಮ, ವಾಯು—ಇವರಿಗೂ ವಿಷ್ಣುವಿಗೂ ಕ್ರಮವಾದ ತಾರತಮ್ಯವನ್ನು ಒಪ್ಪಿಕೊಳ್ಳಲಾಗಿದೆ. ಜೀವನಿಗೂ ಈಶ್ವರನಿಗೂ ಇರುವ ಬೇಧವನ್ನರಿತು ಪರಮಾತ್ಮನನ್ನು ಭೃತ್ಯ ಭಾವದಿಂದ ಆರಾಧಿಸಿ ಮೋಕ್ಷವನ್ನು ಪಡೆಯಬೇಕು. ಪರಮಾತ್ಮ ಸರ್ವಜ್ಞ, ಸರ್ವವ್ಯಾಪಕ, ನಿರತಿಶಯ ಜ್ಞಾನಾನಂದ ಕಲ್ಯಾಣ ಗುಣ ಪರಿಪೂರ್ಣ, ಭಕ್ತಪರಾಧೀನ, ಅಚಿಂತ್ಯ ಶಕ್ತಿಯಿಂದ ಅಸಂಖ್ಯಾತ ರೂಪಗಳನ್ನು ಧರಿಸುವವ. ಸಾಲಿಗ್ರಾಮ, ಪ್ರತಿಮೆ ಮುಂತಾದ ಅರ್ಚಾರೂಪಗಳು ಅದ್ವೈತ, ದ್ವೈತ, ವಿಶಿಷ್ಟಾದ್ವೈತ ಮತಗಳಲ್ಲಿ ಉಂಟು. ಇವು ಸಾಕ್ಷಾದ್ರೂಪಗಳಲ್ಲ. ಸಾನ್ನಿಧ್ಯ ರೂಪಗಳು.

ಶಕ್ತಿ ವಿಶಿಷ್ಟಾದ್ವೈತವೆನಿಸಿಕೊಂಡ ವೀರಶೈವ ಮತದಲ್ಲಿ ಈಶ್ವರನನ್ನು ಶಿವನೆಂದೂ ಆತ ಏಕಮೇವಾದ್ವಿತೀಯನೆಂದೂ ಸೃಷ್ಟಿಸ್ಥಿತಿಲಯಗಳಿಗೆ ಕಾರಣವಾದ ಶಕ್ತಿವಿಶಿಷ್ಟನೆಂದೂ ಹೇಳಲಾಗಿದೆ. ಜಗತ್ತು ಸತ್ಯ; ಅವನ ಶಕ್ತಿಯ ಪರಿಣಾಮವಾಗಿ ಸೃಷ್ಟಿಯಾಗಿ ಮಾಯಾಶಕ್ತಿ ರೂಪದಿಂದ ಜೀವವನ್ನು ಆವರಿಸುತ್ತದೆ. ಜೀವ ಈಶ್ವರನನ್ನು ಅಥವಾ ಪರಾಶಕ್ತಿ ವಿಶಿಷ್ಟಪರಮಾತ್ಮನನ್ನು ಸೇರಲು ಷಟ್ಸ್ಥಲ ಸಿದ್ಧಾಂತವೆಂಬ ಮಾರ್ಗವನ್ನು ವೀರಶೈವ ಧರ್ಮ ಬೋಧಿಸುತ್ತದೆ. ಶಿವ ಲಿಂಗ, ಜೀವಿಗಳು ಅಂಗ, ಲಿಂಗಾಂಗ ಸಾಮರಸ್ಯವೇ ಶೂನ್ಯಸಂಪಾದನೆಯ ಗುರಿ ಎಂಬುದೇ ಈ ಮತದ ತತ್ತ್ವ. 

	(ನೋಡಿ— ಈಶ್ವರವಾದ)
 (ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ